ಭಾಷಾಬೋಧನೆ	
ಮಾನವಸೀಮಿತವಾದ ಮೌಖಿಕ ಸಂಪರ್ಕಕ್ಕೆ ಭಾಷೆ ಸಾಧನ. ಅಂತರಗ್ರಹ ಪ್ರಯಾಣ ಮಾಡುವ ಈ ಕಾಲದಲ್ಲಿ, ಮಾನವನಿಗೆ ತನ್ನ ಪ್ರಗತಿಗೋಸ್ಕರ ಸಾಮಾಜಿಕ ಸಂಪರ್ಕ ಅತ್ಯಗತ್ಯ. ಆದ್ದರಿಂದ ಅವನು ಹಲವು ಭಾಷೆಗಳನ್ನು ಕಲಿಯುವುದು ಅನಿವಾರ್ಯ ಎಂದೇ ಮಾನವನಿಗೆ ಮಾತ್ರ ಸೀಮಿತಗೊಂಡಿರುವ ಸಂಪರ್ಕಸಾಧನ ಭಾಷೆ ಅನುವಂಶೀಯವಾಗಿ ಸಾಗುವುದರ ಬದಲು ಸಂಸ್ಕøತಿಯ ಅಭಿವ್ಯಕ್ತಿಯಾಗಿ ಸಾಗುತ್ತಿದೆ. ಈ ದೃಷ್ಟಿಯಿಂದ ಭಾಷೆಯನ್ನು ನೋಡಿದಾಗ ಸ್ವಭಾಷೆ ಮತ್ತು ಅನ್ಯಭಾಷೆ ಎಂಬ ಎರಡು ಪ್ರಮುಖವರ್ಗಗಳನ್ನು ಗುರುತಿಸಬಹುದು. ವ್ಯಕ್ತಿ ಯಾವ ಸಮಾಜದ ಸದಸ್ಯನಾಗಿರುತ್ತಾನೋ, ಅದು ರೂಪಿಸಿಕೊಂಡ ಭಾಷೆ ಅವನ ಸ್ವಭಾಷೆ. ಇದನ್ನು ಪ್ರಥಮ ಭಾಷೆ (ಎಲ್) ಎಂದು ಕರೆಯುವರು. ಸ್ವಭಾಷೆಗಳೆಲ್ಲ ಮಾತೃಭಾಷೆಗಳಾಗಿರಬೇಕಿಲ್ಲ. ಹುಟ್ಟಿನಿಂದ, ಹೆತ್ತವರಿಂದ ಕಲಿತುಕೊಂಡು ಶೈಶವಾಸ್ಥೆಯಿಂದಲೇ ಬಂದಿರುವ ಭಾಷೆ ಮಾತೃಭಾಷೆ. ಚಿಕ್ಕವಯಸ್ಸಿನಿಂದಲೇ ಮಾತೃಭಾಷೆಯ ಜೊತೆಯಲ್ಲಿ ಪರಿಸರದ ಇತರ ಭಾಷೆಗಳನ್ನು ಕಲಿತು ಅವುಗಳ ಮೂಲಕ ಸಂಪೂರ್ಣವಾಗಿ ತನ್ನ ವಿಚಾರಗಳನ್ನು ವಿನಿಮಯಮಾಡುವ ಸಾಮಥ್ರ್ಯ ಪಡೆದುಕೊಂಡರೆ ಅವು ಆ ವ್ಯಕ್ತಿಯ ಸ್ವಭಾಷೆಗಳಾಗುವುವು. ಉದಾಹರಣೆಗೆ ಕೊಂಕಣಿ ಮಾತೃಭಾಷೆಯುಳ್ಳವರು ತುಳು, ಕನ್ನಡಗಳನ್ನು ಸ್ವಭಾಷೆಗಳನ್ನಾಗಿ ಮಾಡಿಕೊಂಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಡಬಹುದು.

	ಸ್ವಭಾಷೆ ಬಿಟ್ಟುಳಿದ ಭಾಷೆ ಅನ್ಯಭಾಷೆ. ಇದನ್ನು ದ್ವಿತೀಯ ಭಾಷೆ (ಎಲ್2) ಎಂದು ಕರೆಯುವರು. ಅನ್ಯಭಾಷೆಯ ಬಳಕೆ ಸ್ವಭಾಷೆಯ ಬಳಕೆಯಷ್ಟು ವ್ಯಾಪಕವಾಗಿಲ್ಲ. ಇನ್ನೊಂದು ಸಮಾಜದ ವ್ಯಕ್ತಿಗಳೊಡನೆ ಸಂಪರ್ಕ ಬೆಳೆಸಲು, ಅನ್ಯ ಸಂಸ್ಕøತಿಯನ್ನು ತಿಳಿಯಲು, ಪರಭಾಷೆಯಲ್ಲಿ ಅಭಿವ್ಯಕ್ತಗೊಂಡ ಸಾಹಿತ್ಯ ವಿಜ್ಞಾನಗಳನ್ನು ಅರಿಯಲು ಅನ್ಯಭಾಷೆ ಬಳಸುತ್ತೇವೆ. ಅನ್ಯಭಾಷೆಯ ಬೋಧನೆ ಮತ್ತು ಕಲಿಕೆ ಸುಲಭದ ಕೆಲಸವಲ್ಲ. ಆದ್ದರಿಂದ ಒಂದು ನಿರ್ದಿಷ್ಟ ಅವಧಿಯೊಳಗೆ ಭಾಷಾ ಅಧ್ಯಾಪನ ಮತ್ತು ಅಧ್ಯಯನದ ಉದ್ದೇಶ ಸಾಧಿಸಲು ತಕ್ಕುದಾದ ತತ್ತ್ವಗಳನ್ನೂ ಪದ್ಧತಿಗಳನ್ನೂ ಅಳವಡಿಸಿಕೊಂಡು ಯೋಜಿತವಾದ ರೀತಿಯಲ್ಲಿ ಅವನ್ನು ನಡೆಸಬೇಕಾಗುತ್ತದೆ.

	ಭಾಷೆಯನ್ನು ಕಲಿಸುವ ಪದ್ಧತಿಗಳಲ್ಲಿ ಅತ್ಯಂತ ಪ್ರಾಚೀನವಾದ ಕ್ರಮ `ವ್ಯಾಕರಣ ಭಾಷಾಂತರ ಪದ್ಧತಿ'. ಇದರಲ್ಲಿ ವ್ಯಾಕರಣ ಮತ್ತು ಭಾಷಾಂತರಕ್ಕೆ ಹೆಚ್ಚಿನ ಮಹತ್ತ್ವ ಕೊಡಲಾಗುತ್ತದೆ. ಈ ಪದ್ಧತಿ ಗ್ರಾಂಥಿಕ ಭಾಷೆಗೆ ಹೆಚ್ಚು ಪ್ರಾಮುಖ್ಯವೀಯುತ್ತದೆ. ವಿದ್ಯಾರ್ಥಿಗಳನ್ನು ವ್ಯಾಕರಣದಲ್ಲಿ ಪಳಗಿಸಲು ಭಾಷಾಂತರವನ್ನು ಬಳಸಲಾಗುತ್ತದೆ. ಇದಕ್ಕೆ ಬೇಕಾಗಿರುವ ಪದಸಂಪತ್ತಿಗೋಸ್ಕರ ವಿದ್ಯಾರ್ಥಿಗಳು ನಿಘಂಟನ್ನು ಕಂಠಪಾಠಮಾಡಬೇಕಾಗುತ್ತದೆ. ಅಲ್ಲದೆ ಅನ್ಯ ಭಾಷೆಯ ಧ್ವನ್ಯಾತ್ಮಕ ಮತ್ತು ವ್ಯಾಕರಣಾತ್ಮಕ ವೈಶಿಷ್ಟ್ಯಗಳು ಅನೇಕ ಸಮಸ್ಯೆಗಳನ್ನು ಒಡ್ಡುತ್ತವೆ. ಇವನ್ನು ಹೋಗಲಾಡಿಸುವ ಪ್ರಯತ್ನದ ಫಲವಾಗಿ `ನೇರಪದ್ಧತಿ' ರೂಪ ತಾಳಿತು. ಸಮಾಜ ಸಂಪರ್ಕದ ತಳಹದಿಯ ಮೇಲೆ ಸಂದರ್ಭ ಸನ್ನಿವೇಶಗಳ ಹಿನ್ನೆಲೆಯಲ್ಲಿ ಪರಭಾಷೆಯನ್ನು ಕಲಿಸುವುದು ಈ ಪದ್ಧತಿಯ ವೈಶಿಷ್ಟ್ಯ. ಇದರಿಂದ ವಿದ್ಯಾರ್ಥಿಗಳಿಗೆ ಆಡುನುಡಿ ಶೀಘ್ರವಾಗಿ ತಿಳಿದು ಭಾಷೆಯ ನೈಜಸ್ವರೂಪ ಕೈವಶವಾಗುತ್ತದೆ. ನೇರ ಪದ್ಧತಿಯಲ್ಲಿ ಅನ್ಯಭಾಷಾರಚನೆಯನ್ನು ಸ್ವಭಾಷಾ ರಚನೆಯೊಡನೆ ತುಲನೆ ಮಾಡಿ ಅಭ್ಯಾಸ ಮಾಡದಿರುವುದರಿಂದ ವಿದ್ಯಾರ್ಥಿ ಎದುರಿಸುವ ಎಷ್ಟೋ ಭಾಷಾ ತೊಡಕುಗಳಿಗೆ ಪರಿಹಾರ ಸಿಗುವುದಿಲ್ಲ. ಭಾಷೆಯ ಕ್ಲಿಷ್ಟ ರಚನೆಗಳ ಬಗೆಗೆ ಸಂಪೂರ್ಣ ಜ್ಞಾನವೀಯುವುದು ಈ ಪದ್ಧತಿಯಿಂದ ಸಾಧ್ಯವಿಲ್ಲ. ಭಾಷೆಯನ್ನು ಸಂದರ್ಭಾನುಸಾರ ಅಳವಡಿಸುವಲ್ಲಿ ಅಥವಾ ಭಾಷಾಶೈಲಿ ಬೆಳೆಸುವಲ್ಲಿ ಮತ್ತು ಸಾಹಿತ್ಯ ನಿರ್ಮಾಣ ಮಾಡುವಲ್ಲಿ ನೇರಪದ್ಧತಿ ವಿಫಲವಾಗಿದೆ.

	ಭಾಷಾರಚನೆಯ ಮೇಲೆ ಸಂಶೋಧನೆ ನಡೆಸುತ್ತಿದ್ದ ಲಂಡನ್ ವಿಶ್ವವಿದ್ಯಾಲಯದ `ಲಂಡನ್ ಇನ್‍ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್ ಹಾಗೂ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳಲ್ಲಿಯ ಭಾಷಾಪರಿಣತರು ರಚನಾತ್ಮಕ ಪದ್ಧತಿ ರೂಪಿಸಿದರು ಪಾಠಗಳನ್ನು ಶ್ರೇಣಿರೂಪದಲ್ಲಿ ಯೋಜಿಸಿಕೊಂಡು ಭಾಷೆಯ ರಚನೆಗಳನ್ನು ವಿವರಣೆಗಳೊಂದಿಗೆ. ಹಂತಹಂತವಾಗಿ ಕಲಿಸತೊಡಗಿದುದರಿಂದ ಈ ಪದ್ದತಿ ನೇರ ಪದ್ಧತಿಗಿಂತ ಹೆಚ್ಚು ಪರಿಣಾಮಕಾರಿಯಾಯಿತು.

	ನೇರಪದ್ದತಿಯ ವಿಫಲತೆಯಿಂದಾಗಿ ರೂಪುಗೊಂಡ ಮತ್ತೊಂದು ಪದ್ಧತಿಯೆಂದರೆ ಶ್ರವಣ-ಮೌಖಿಕ ಪದ್ಧತಿ. ಇದರ ಪ್ರಕಾರ ವಿದ್ಯಾರ್ಥಿಗಳಿಗೆ ಶ್ರವಣ. ಗ್ರಹಣ, ಪಠನ, ಬರಹ ಕೌಶಲ್ಯಗಳಲ್ಲಿ ಪರಿಣತಿ ಕೊಡುತ್ತಾರೆ. ಮೂಲವಾಕ್ಯಗಳನ್ನು ಮೊದಲು ಕಲಿಸಿ ಅವುಗಳಿಂದ ಅನೇಕ ವಾಕ್ಯಗಳನ್ನು ಸಾಧಿಸುವ ತಂತ್ರ ಕಲಿಸಲಾಗುತ್ತದೆ. ಪರಿಮಿತ ಪದಸಂಪತ್ತಿನೊಳಗೆ ಸರಳ ಸಂಭಾಷಣೆಗಳನ್ನು ಕಲಿಸಿ ಭಾಷಾ ರಚನೆಗಳನ್ನು ಕಲಿಸುವುದು ಇಲ್ಲಿಯ ವೈಶಿಷ್ಟ್ಯ. ಆದರೆ ಈ ಪದ್ಧತಿಯಲ್ಲೂ ತೊಡಕುಗಳು ಇಲ್ಲದಿಲ್ಲ. ಅನ್ಯ ಭಾಷೆ ಹಾಗೂ ಸ್ವಭಾಷೆಗಳ ತುಲನಾತ್ಮಕ ಅಧ್ಯಯನಕ್ಕೆ ಇಲ್ಲಿ ಆಸ್ಪದವಿಲ್ಲದಿರುವುದರಿಂದ ವಿದ್ಯಾರ್ಥಿ ಅನೇಕ ಭಾಷಾಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡಬೇಕಾಗುತ್ತದೆ. ಯಾವುದೋ ಒಂದು ಸಂದರ್ಭ ಆಧರಿಸಿಕೊಂಡು ಬರೆದ ವಾಕ್ಯಗಳನ್ನು ಕಲಿಯುವುದರಿಂದ ಇತರ ಸಂದರ್ಭಗಳಲ್ಲಿ ಬೇಕಾದ ವಾಕ್ಯಗಳನ್ನು ಬಳಸಲು ಅತ ಅಸಮರ್ಥನಾಗುತ್ತಾನೆ.

	ಬೋಧನ ಪದ್ಧತಿಯಲ್ಲಿ ಕಂಡುಬಂದ ಹಲವಾರು ಲೋಪದೋಷಗಳನ್ನು ನಿವಾರಿಸಲು ಎಲ್ಲ ದೃಷ್ಟಿಯಿಂದ ಸಮಂಜಸವಾದ ಪದ್ಧತಿಯೊಂದನ್ನು ರೂಪಿಸಬೇಕಾಯಿತು. ಇದರಿಂದಾಗಿ `ಭಾಷಾವೈಜ್ಞಾನಿಕ ಪದ್ಧತಿ, ಕಾರ್ಯರೂಪಕ್ಕೆ ಬಂದಿತು. ಅನ್ಯಭಾಷೆಯನ್ನು ಸ್ವಭಾಷೆಯಂತೆ ಲೀಲಾಜಾಲವಾಗಿ ಬಳಸುವ ಸಾಮಥ್ರ್ಯ ಕಲಿಸುವುದೇ ಈ ಪದ್ದತಿಯ ಗುರಿ. ಪ್ರಾರಂಭದಲ್ಲಿ ಮೂಲವಾಕ್ಯಗಳನ್ನು ಕಂಠಪಾಠ ಮಾಡಿಸಿ, ತಕ್ಕುದಾದ ಸನ್ನಿವೇಶಗಳ ಹಿನ್ನೆಲೆಯಲ್ಲಿ ಅವುಗಳ ರೂಢೀಕರಣ ಅತಿಕಲಿಕೆಯ ರೂಪದಲ್ಲಿ ನಡೆಯುತ್ತದೆ. ರೂಪಾಂತರ ತಂತ್ರಗಳ ಮೂಲಕ ನಾನಾವಿಧದ ವಾಕ್ಯಗಳನ್ನು ಉತ್ಪಾದಿಸುವಂತೆ ತರಬೇತಿ ಕೊಡಲಾಗುತ್ತದೆ. ಭಾಷೆಯನ್ನು ಹಂತಗಳನ್ನಾಗಿ ವಿಶ್ಲೇಷಿಸಿ ಅವುಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಗುತ್ತದೆ. ಯೋಜಿತ ಪಾಠಗಳ ಮೂಲಕ ಭಾಷೆಯ ಕ್ಲಿಷ್ಟ ಸಮಸ್ಯೆಗಳನ್ನೂ ಸೂಕ್ಷ್ಮ ವಿಚಾರಗಳನ್ನೂ ಕಲಿಸುವುದರಿಂದ ಅವು ವಿದ್ಯಾರ್ಥಿಗೆ ಭಾರವೆನಿಸಲಾರವು. ಅತ್ಯಾಧುನಿಕ ಭಾಷಾಬೋಧನಾ ಸಲಕರಣೆಗಳನ್ನು ಉಪಯೋಗಿಸುವುದರಿಂದ ಭಾಷೆಯ ಎಲ್ಲ ಕೌಶಲಗಳನ್ನು ಯಶಸ್ವಿಯಾಗಿ ಕಲಿಸಲು ಸಾಧ್ಯವಾಗುವುದರಿಂದ ಎಲ್ಲ ಭಾಷಾಬೋಧನ ಪದ್ಧತಿಗಳಿಗಿಂತ ಭಾಷಾವೈಜ್ಞಾನಿಕ ಪದ್ಧತಿಯೇ ಹೆಚ್ಚು ಷರಿಣಾಮಕಾರಿ ಎನಿಸಿದೆ.

	ಅನ್ಯಭಾಷಾ ಅಧ್ಯಾಪಕನ ತತ್ತ್ವಗಳು: ಅನ್ಯಭಾಷೆಯನ್ನು ಸ್ವಭಾಷೆಯಂತೆ ನಿರರ್ಗಳವಾಗಿ ಬಳಸಲು ಸಾಧ್ಯವಾದರೆ ವಿದ್ಯಾರ್ಥಿ ಆ ಭಾಷೆಯನ್ನು ಪೂರ್ಣವಾಗಿ ಕಲಿತಂತಾಗುತ್ತದೆ, ವಿದ್ಯಾರ್ಥಿಗಳಿಗೆ ಭಾಷೆ ಕರಗತವಾಗಬೇಕಾದರೆ ಅಧ್ಯಾಪಕ ಕೆಲವು ತತ್ತ್ವಗಳನ್ನು ಅನುಸರಿಸಿ ಕಲಿಸಬೇಕಾಗುತ್ತದೆ. ಈ ದೃಷ್ಟಿಯಿಂದ ರಾಬರ್ಟ್ ಲ್ಯಾಡೋ ರೂಪಿಸಿರುವ ಅಧ್ಯಾಪನ ತತ್ತ್ವಗಳು ಹೆಚ್ಚು ಸಹಾಯಕ. ಅವನ್ನು ಇಲ್ಲಿ ಗಮನಿಸಬಹುದು:

	1 ಮಾತು ಮೊದಲು, ಬರಹ ಆಮೇಲೆ: ಭಾಷೆಯ ನೈಜರೂಪ ಆಡುನುಡಿ: ಬರಹ ಆಡುನುಡಿಯನ್ನು ಎಂದಿಗೂ ಸಂಪೂರ್ಣವಾಗಿ ಪ್ರತಿಬಿಂಬಿಸಲಾರದು. ಆದ್ದರಿಂದ ಅನ್ಯಭಾಷೆ ಕಲಿಸುವಲ್ಲಿ ಮೊದಲು ಭಾಷೆಯ ಆಡುರೂಪ ಕಲಿಸಿದ ಮೇಲೆ ಬರಹದ ರೂಪ ಕಲಿಸುವ ಪ್ರಯತ್ನ ಮಾಡಬೇಕು.

	2 ಮೂಲವಾಕ್ಯಗಳ ಮನನ: ಮೂಲ ಸರಳ ವಾಕ್ಯಗಳೇ ವ್ಯವಹಾರದಲ್ಲಿ ಅತಿಯಾಗಿ ಬಳಕೆಯಾಗುವುದರಿಂದ ಅವುಗಳ ರೂಢೀಕರಣ ಮೊತ್ತಮೊದಲು ಆಗಬೇಕು. ಅನಂತರ ರೂಪಾಂತರ ತಂತ್ರಗಳ ಸಹಾಯದಿಂದ ಸಾಧಿತವಾಕ್ಯಗಳನ್ನು ಕಲಿಸುವುದು ಸುಲಭವಾಗುತ್ತದೆ.

	3 ಮಾದರಿಗಳ ರೂಢೀಕರಣ: ವಿದ್ಯಾರ್ಥಿಗಳು ಭಾಷಾಶಕ್ತಿ ಪಡೆಯಬೇಕಾದರೆ ಭಾಷೆಯನ್ನು ಹಲವಾರು ರಚನಾತ್ಮಕ ಮಾದರಿಗಳ ಮೂಲಕ ಕಲಿಸಬೇಕು.

	4 ಧ್ವನಿವ್ಯವಸ್ಥೆಯ ಪ್ರಯೋಗ: ಭಾಷೆಯನ್ನು ಕರಗತಗೊಳಿಸಲು ಅದರ ಉಚ್ಚಾರಣಾ ರೀತಿ ಕಲಿಯುವುದು ಅತಿ ಮುಖ್ಯ. ಧ್ವನ್ಯಂಗಗಳು, ಅವುಗಳ ಉತ್ಪಾದನಾ ರೀತಿಗಳನ್ನು ವಿವರಿಸಿ ಕನಿಷ್ಠ ತಮಯುಗ್ಮಗಳ ಸಹಾಯದಿಂದ ಧ್ವನಿಮಾತ್ಮಕ ವ್ಯತ್ಯಾಸಗಳನ್ನು ತಿಳಿಸಿ ಅವು ಯಾವ ಪರಿಸರಗಳಲ್ಲಿ ಹೇಗೆ ಉಚ್ಚಾರಣೆಗೊಳ್ಳುತ್ತವೆಂಬುದನ್ನು ಸೂಚಿಸಿದರೆ ಭಾಷೆಯ ಕಲಿಕೆ ಕಷ್ಟಕರವೆನಿಸಲಾರದು.

	5 ಪದಸಂಪತ್ತಿನ ನಿಯಂತ್ರಣ : ಭಾಷೆಯೆಂದರೆ ಶುಷ್ಕ ಪದಭಂಡಾರವಲ್ಲ; ಮುಖ್ಯವಾಗಿ ಅದು ಪದಗಳನ್ನು ಸಂಯೋಜಿಸುವ ಮತ್ತು ಬಳಸುವ ರೀತ. ಕೆಲವೇ ಕೆಲವು ಪದಗಳ ಸಹಾಯದಿಂದ ಹಲವಾರು ವಾಕ್ಯರಚನಾ ವಿನ್ಯಾಸಗಳನ್ನು ಮಾಡುವ ಕಲೆಯನ್ನು ಶಿಕ್ಷಕ ವಿದ್ಯಾರ್ಥಿಗಳಿಗೆ ಕಲಿಸಿದರೆ ಶೀಘ್ರವಾಗಿ ಭಾಷೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ.

	6 ಭಾಷಾ ಸಮಸ್ಯೆಗಳ ಬಗ್ಗೆ ಚರ್ಚೆ : ಸ್ವಭಾಷೆ ಮತ್ತು ಅನ್ಯಭಾಷೆಗಳ ಘಟಕ ಹಾಗೂ ರಚನೆಗಳ ನಡುವಿನ ವ್ಯತ್ಯಾಸಗಳೇ ಭಾಷಾ ಸಮಸ್ಯೆಗಳು. ಅನ್ಯಭಾಷೆ ಕಲಿಯುತ್ತಿರುವ ವಿದ್ಯಾರ್ಥಿಯಲ್ಲಿ ಸ್ವಭಾಷೆ ಬೇರೂರಿರುತ್ತದೆ. ಆದ್ದರಿಂದ ಅನ್ಯಭಾಷಾರಚನೆಗಳನ್ನು ಬಳಸುವಲ್ಲಿ ಎಷ್ಟೋ ಸಲ ಅರಿವಿಲ್ಲದೆಯೇ ಸ್ವಭಾಷಾ ರಚನೆಗಳನ್ನು ವಿದ್ಯಾರ್ಥಿ ಬಳಸಬಹುದು. ಈ ಕಾರಣದಿಂದಾಗಿ ಅವನಿಗೆ ಅನ್ಯಭಾಷೆಯ ಮೇಲೆ ಹಿಡಿತ ಸಿಗಲಾರದು. ಅದಕ್ಕೋಸ್ಕರ ವೈದೃಶ್ಯಾತ್ಮಕ ವಿಶ್ಲೇಷಣೆಯ ಮೂಲಕ ಭಾಷಾಸಮಸ್ಯೆಗಳನ್ನು ಅಧ್ಯಾಪಕ ತೋರಿಸಿಕೊಡಬೇಕು.

	7 ಬರಹ ಮಾತಿನ ತದ್ರೂಪವಲ್ಲ : ಒಂದು ಭಾಷೆಯನ್ನು ಆ ಭಾಷೆಯ ಲಿಪಿಯ ಮೂಲಕ ಪರಿಪೂರ್ಣವಾಗಿ ಅಭಿವ್ಯಕ್ತಗೊಳಿಸುವುದು ಸಾಧ್ಯವಿಲ್ಲ. ಒಂದೇ ಉಚ್ಚಾರಣೆಯನ್ನು ಹಲವಾರು ರೂಪದಲ್ಲಿ ಬರೆಯಬಹುದು. ಅಂತೆಯೇ ಹಲವಾರು ಉಚ್ಚಾರಣೆಗಳನ್ನು ಒಂದೇ ರೂಪದಲ್ಲಿ ಬರೆಯಬಹುದು.

	8 ಹಂತಹಂತವಾಗಿ ಕಲಿಸುವುದು : ಭಾಷೆ ಸಂಕೀರ್ಣಸ್ವರೂಪಿಯಾದ್ದರಿಂದ ಅದನ್ನು ಹಂತಹಂತವಾಗಿ ವಿಶ್ಲೇಷಿಸಿ ಕಲಿಸುವುದು ಯುಕ್ತಕ್ರಮ.

	9 ಭಾಷಾಂತರದ ಸ್ಥಾನ : ಅನ್ಯಭಾಷೆ ಸ್ವಭಾಷೆಯ ಭಾಷಾಂತರವಲ್ಲ. ಪ್ರತಿಯೊಂದು ಭಾಷೆಗೂ ತನ್ನತನವಿದೆ. ಆದ್ದರಿಂದ ಭಾಷಾಂತರದ ಮೂಲಕ ಮತ್ತೊಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯುವುದು ಸಾಧ್ಯವಿಲ್ಲ. ಅಲ್ಲದೆ, ಭಾಷಾಂತರದ ಮೂಲಕ ಕಲಿತ ಭಾಷೆ ಕೃತ್ರಿಮವಾಗಿರುವುದರಿಂದ ಅದನ್ನು ಎಲ್ಲ ಸಾಮಾಜಿಕ ಸನ್ನಿವೇಶಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಭಾಷಾಂತರದ ಮೂಲಕ ಭಾಷೆ ಕಲಿಯುವುದು ಉಚಿತವಲ್ಲ.

	10 ಭಾಷಾ ಮಾದರಿ : ಸುಶಿಕ್ಷಿತರ ಭಾಷೆಯನ್ನೇ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಕೊಡುವುದು ಲೇಸು. ಆದರೆ ಈ ವಿಷಯ ವಿದ್ಯಾರ್ಥಿಯ ಕಲಿಕೆಯ ಗುರಿಯನ್ನು ಹೊಂದಿಕೊಂಡಿದೆ.

	11 ಸಾಧನೆ : ನಿರ್ದಿಷ್ಟ ಅವಧಿಯೊಳಗೆ ಭಾಷೆ ಕರತಲಾಮಲಕವಾಗಬೇಕಾದರೆ ಸತತ ಸಾಧನೆ ಹಾಗೂ ಪರಿಶ್ರಮ ಅತ್ಯಗತ್ಯ. ಪುನರಾವರ್ತನೆ ಮೊದಲಾದ ತಂತ್ರಗಳ ಸಹಾಯ ಅತ್ಯಗತ್ಯ.

	12 ಉತ್ತರಗಳನ್ನು ಹೊರಡಿಸುವ ಕ್ರಮ : ಅಧ್ಯಾಪಕನ ಪ್ರಶ್ನೆಗಳಿಗೆ ಅನ್ಯಭಾಷಾ ವಿದ್ಯಾರ್ಥಿ ಉತ್ತರಕೊಡುವುದು ಸಾಹಸವೇ ಸರಿ. ಆತ ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ಉತ್ತರಗಳು ಹೊಳೆಯುವಂತೆ ಪ್ರಶ್ನೆಗಳನ್ನು ಕೇಳುವ ಜಾಣ್ಮೆ ಅಧ್ಯಾಪಕನಲ್ಲಿರಬೇಕು.

	13 ವೇಗ ಮತ್ತು ಶೈಲಿ : ಆರಂಭದಲ್ಲಿ ಅಧ್ಯಾಪನ ನಿಧಾನವಾಗಿ ಸಾಗಬೇಕು. ಸಮಯ ಕಳೆದಂತೆ ವಿದ್ಯಾರ್ಥಿಯಲ್ಲಿ ಭಾಷೆಗೆ ಸಹಜವಾದ ವೇಗ ಮತ್ತು ಶೈಲಿ ಬರುವಂತೆ ಯುಕ್ತ ತರಬೇತಿ ಕೊಡಬೇಕು.

	14 ತೀವ್ರ ಪುರಸ್ಕಾರ : ಅನ್ಯಭಾಷಾ ವಿದ್ಯಾರ್ಥಿಯಲ್ಲಿ ಒಂದು ರೀತಿಯ ಅಂಜಿಕೆ ಇರುವುದು ಸ್ವಾಭಾವಿಕ. ಅವನಿಗೆ ಎಲ್ಲ ರೀತಿಯಿಂದಲೂ ಉತ್ತೇಜನ ಕೊಡಬೇಕು. ಆತನನ್ನು ಚೇಷ್ಟೆಗೆ ಗುರಿಮಾಡುವುದಾಗಲಿ ತಿರಸ್ಕಾರಭಾವದಿಂದ ನೋಡುವುದಾಗಲೀ ಸಲ್ಲದು. ಆತನ ಪ್ರಯತ್ನಗಳನ್ನು ಗುರುತಿಸಿ ಮನಸಾರೆ ಕೊಂಡಾಡಿ ಪುರಸ್ಕರಿಸಬೇಕು. ಆಗ ವಿದ್ಯಾರ್ಥಿಯಲ್ಲಿ ಧೈರ್ಯ, ಆಸಕ್ತಿ ಹುಟ್ಟಿ ಹೊಸ ಭಾಷೆಯನ್ನು ಶೀಘ್ರವಾಗಿ ಕಲಿಯುತ್ತಾನೆ.

	15 ಅನ್ಯಭಾಷೆ, ಸಂಸ್ಕøತಿಗಳೊಡನೆ ಮೈತ್ರಿ : ಭಾಷೆ ಸಂಸ್ಕøತಿಯ ಒಂದು ಅವಿಭಾಜ್ಯ ಅಂಗ. ಈ ಕಾರಣದಿಂದಾಗಿ ಭಾಷೆಯನ್ನು ಅದರ ಸಂಸ್ಕøತಿಯ ಮುನ್ನೆಲೆಯಲ್ಲಿ ಕಲಿಸುವುದು ಯೋಗ್ಯ.

	16 ಸಂಸ್ಕøತಿಯ ಮುನ್ನೆಲೆಯಲ್ಲಿ ಅರ್ಥ ವಿವರಣೆ : ಭಾಷೆಯ ಎಷ್ಟೋ ಪದಗಳ ಅರ್ಥ ಸಂಸ್ಕøತಿಯ ಮುನ್ನೆಲೆಯಲ್ಲಿ ಮಾತ್ರ ಸರಿಯಾಗಿ ತಿಳಿದುಕೊಳ್ಳುವುದು ಸಾಧ್ಯ. ಆದ್ದರಿಂದ ಪದಗಳ ಅರ್ಥ ತಿಳಿಯಲು ನಿಘಂಟಿಗೆ ಸೀಮಿತವಾಗಿರದೆ, ಸಂಸ್ಕøತಿಯ ಮುನ್ನೆಲೆಯಲ್ಲಿ ಅರ್ಥವಿಸಲು ಅಧ್ಯಾಪಕ ಪ್ರಯತ್ನಿಸಬೇಕು.

	17 ಭಾಷೆಯ ಸಂಪೂರ್ಣ ಜ್ಞಾನ : ವಿದ್ಯಾರ್ಥಿಗೆ ಭಾಷೆಯ ಸಂಪೂರ್ಣ ಜ್ಞಾನ ನೀಡುವುದೇ ಅಧ್ಯಾಪಕನ ಮುಖ್ಯ ಗುರಿಯಾಗಿರಬೇಕು. ತರಗತಿಯಲ್ಲಿ ಮನರಂಜನೆ ನೀಡಿ ಕಾಲಹರಣ ಮಾಡುವುದು ಅಲ್ಲ. ಕಲಿತ ಭಾಷೆಯನ್ನು ವಿದ್ಯಾರ್ಥಿ ನಿರರ್ಗಳವಾಗಿ ಎಲ್ಲ ಸನ್ನಿವೇಶಗಳಲ್ಲೂ ಬಳಸುವಂತೆ ಆತನಿಗೆ ಎಲ್ಲ ರೀತಿಯಿಂದ ಸಹಾಯ ಮಾಡುವುದೇ ಅಧ್ಯಾಪಕನ ಕರ್ತವ್ಯ. ಆದ್ದರಿಂದ ಅಧ್ಯಾಪಕನಲ್ಲಿ ಸರಿಯಾಗಿ ಪಾಠಹೇಳುವ ಆತ್ಮನಿಷ್ಠೆ ಹಾಗೂ ಕರ್ತವ್ಯಪರತೆಯಿರಬೇಕು.

	ಈ ಎಲ್ಲ ತತ್ತ್ವಗಳನ್ನು ಅನ್ಯ ಭಾಷಾಬೋಧನೆಯಲ್ಲಿ ಅಳವಡಿಸಲಾಗುತ್ತದೆ. ಆದರೆ ವಿದ್ಯಾರ್ಥಿಯ ವಯಸ್ಸು, ಉದ್ದೇಶ, ವಿದ್ಯಾಮಟ್ಟ, ಮಾನಸಿಕ ಅರ್ಹತೆ, ಪೀಠೋಪಕರಣಗಳ ಲಭ್ಯತೆ, ಶಿಕ್ಷಕನ ಸೌಲಭ್ಯ, ಸ್ಥಾನಮಾನ ಮುಂತಾದವನ್ನು ಅವಲಂಬಿಸಿ ಮೇಲಿನ ತತ್ತ್ವಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗಬಹುದು.						
(ಡಬ್ಲ್ಯೂ. ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ